Monday, 2 July 2018
Thursday, 3 May 2018
ಕೃಷಿ ಭಾಗ್ಯ = ಲೂಟಿ ಭಾಗ್ಯ ! Where Krishi Bhagya ?
ಕೃಷಿ ಭಾಗ್ಯ = ಲೂಟಿ ಭಾಗ್ಯ !
ಕೂಡಂಡ ರವಿ, ಹೊದ್ದೂರು, ಕೊಡಗು
ಕೃಷಿ ಭಾಗ್ಯ 2017-18 ಅನ್ನು ಸರಕಾರ ಜಾರಿಗೆ ತಂದಿದೆ. ಈ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣ
ಮಾಡುವುದು ಯೋಜನೆಯ ಗುರಿ. ಸರಕಾರದ ವಿವಿಧ ಅಳತೆಯ ಹಾಗೂ ಘಟಕದ ವೆಚ್ಚ ಈ ಕೆಳಗಿನಂತಿದೆ.
ಕೃಷಿ ಹೊಂಡದ ಗಾತ್ರ ವೆಚ್ಚ
10*10* 3
22087.18
12*12*3
27080 00
15*15*3
39589-00
18*18*3
52032-00
21*21*3
72502-00
ಈ ಮೇಲಿನ ಅಳತೆ ಮತ್ತು ದರವನ್ನು ನಿಗದಿ ಪಡಿಸಲಾಗಿದೆ.
ಆದರೆ, ಈ ಮೇಲಿನ ಅಳತೆಯಲ್ಲಿ ಕೇವಲ 21*21*3 ಎಂದರೆ, 70* 70* 10 ಘನ ಅಡಿ ಗಾತ್ರದ
ಕೆರೆಯ ಬಗ್ಗೆ ಮಾತ್ರ ಮಾಹಿತಿ ನೀಡಿ, ಕೃಷಿ ಅಧಿಕಾರಿಗಳು
ಅರ್ಜಿ ಪಡೆದಿರುತ್ತಾರೆ. ಅಲ್ಲದೆ, ರೈತರಿಂದ ತಲಾ 10, 300 ರೂಪಾಯಿಯನ್ನು ಹಿಟಾಚಿ
ಮಾಲೀಕರಿಗೆ ಕೊಡಿಸಿರುತ್ತಾರೆ. 21 ಘಂಟೆಯ ಅವಧಿಯಲ್ಲಿ ಕೆರೆಯನ್ನು ತೆಗೆಯಲಾಗುತ್ತದೆ. ಇದು 49 ಸಾವಿರ ಘನ ಅಡಿಯಾಗಬೇಕು. ಆದರೆ, ಇಲಾಖಾಧಿಕಾರಿಗಳು 42 ಸಾವಿರ ಘನ ಅಡಿಯ ಕೆರೆ ನಿರ್ಮಿಸುತ್ತಿದ್ದಾರೆ. 10 ಅಡಿ ಆಳ ಇರಬೇಕಾದ ಕೆರೆ 7. 5 ಅಡಿ ಮಾತ್ರ ಇರುತ್ತದೆ. ಸರಕಾರ ಮೇಲೆ ಸೂಚಿಸಿದಂತೆ ಸಣ್ಣ ಪ್ರಮಾಣದ ಕೆರೆ ನಿರ್ಮಾಣಕ್ಕೆ
ಸೂಚಿಸಿದ್ದರೂ, ಆ ಬಗ್ಗೆ ಅಧಿಕಾರಿಗಳು
ಸರಿಯಾದ ಮಾಹಿತಿ ನೀಡದೆ ವಂಚಿಸುತ್ತಿದ್ಧಾರೆ. ಇವರು ರೈತರಿಗೆ, ದೊಡ್ಡ ಕೃಷಿ ಹೊಂಡ
ನಿರ್ಮಾಣದತ್ತ ಮಾತ್ರ ಒಲವು ತೋರುತ್ತಿದ್ದಾರೆ. ದೊಡ್ಡ ಕೃಷಿ ಹೊಂಡ ತೆಗೆಯಲು ಕೇವಲ 21 ಸಾವಿರ ರೂಪಾಯಿ ಮಾತ್ರ ಖರ್ಚಾಗುತ್ತಿದೆ. ಇದರಲ್ಲಿ ಸರಕಾರದ ಪಾಲು
ಕೇವಲ 11 ಸಾವಿರ. ಆದರೆ, ಸರಕಾರ ಈ ಕೃಷಿ ಹೊಂಡಕ್ಕೆ 48 ಸಾವಿರ ಕರೆಯ
ಬಾಪ್ತು ಪಡೆಯಲಾಗುತ್ತದೆ. ಇದರಿಂದ ಪ್ರತಿ ಕೆರೆಯಿಂದ 37 ಸಾವಿರ ರೂಪಾಯಿಯನ್ನು ರೈತರ ಹೆಸರಿನಲ್ಲಿ ಪಡೆದು ಅಧಿಕಾರಿಗಳು ಮತ್ತು ಸರಕಾರ ಮೋಸ ಮಾಡುತ್ತಿರುವರು. ಸರಕಾರ ಪ್ರತಿ ತಾಲೂಕಿಗೂ 600 ಕೆರೆ ತೆಗೆಸಲು ಗುರಿ ನಿಗಧಿ ಪಡಿಸಲಾಗಿದೆ. ಈಗಾಗಲೇ ಸರಾಸರಿ 50 ರಷ್ಟು ಕರೆಯ ಕಾಮಗಾರಿ ಮುಗಿದಿದೆ. ರೈತರೇ ನೇರವಾಗಿ ಕೃಷಿ ಹೊಂಡ
ನಿರ್ಮಾಣ ಮಾಡಿ, ಸರಕಾರದಿಂದ ಹಣ ಹೊಂದಲು
ಅವಕಾಶವಿದ್ದರೂ, ಕೂಡಾ ಈ ಬಗ್ಗೆ ಅಧಿಕಾರಿ
ವರ್ಗ ಆಸಕ್ತಿ ತೋರಿಸುವುದಿಲ್ಲ. ಸರಕಾರ ಹಾಗೂ ಅಧಿಕಾರಿ ವರ್ಗ ತಮಗೆ ಲಾಭವೆನಿಸುವ ಯೋಜನೆಯ ಪಟ್ಟಿ
, ಗುರಿಯನ್ನು
ನಿಗದಿ ಪಡಿಸಲಾಗುತ್ತದೆ. ಆದರೆ, ಸರಕಾರ ಇಂತಿಷ್ಟು ಆಹಾರ ಧಾನ್ಯ ಬೆಳೆಸುವಂತೆ ಅಧಿಕಾರಿ ವರ್ಗಕ್ಕೆ ಗುರಿ ನಿಗದಿ ಮಾಡಿಲ್ಲ.
ಇದಲ್ಲದೆ, ಡೋಲೋಮೈಟ್ ಖರೀದಿ ಮತ್ತು ವಿತರಣೆಯಲ್ಲಿ ಬಹುದೊಡ್ಡ ಪ್ರಮಾಣದ
ಭ್ರಷ್ಟಾಚಾರ ನಡೆದಿದೆ. ಖಾಸಗಿ ಮಾರುಕಟ್ಟೆಯಲ್ಲಿ 2600 ರೂಪಾಯಿಗೆ ಖಾಸಗಿ ಮಾರುಕಟ್ಟೆಯಲ್ಲಿ ಧಾರಾಳವಾಗಿ ಸಿಗುತ್ತದೆ. ಅದೇ ಸುಣ್ಣವನ್ನು ಸರಕಾರ
ಆಂಧ್ರ ಪ್ರದೇಶದಿಂದ ತರುವ ಡೋಲೋಮೈಟ್‍ಗೆ ಸರಕಾರ 3000 ನೀಡಿ ಖರೀದಿಸುತ್ತದೆ. ಪ್ರತಿ ಟನ್‍ಗೆ ಖಾಸಗಿ 400 ರೂಪಾಯಿ ಹೆಚ್ಚುವರಿ ಪಡೆದು ರೈತರಿಗೆ ಮತ್ತು ಸರಕಾರಕ್ಕೆ ಅಧಿಕಾರಿಗಳು ಮೋಸ
ಮಾಡುತ್ತಿದ್ದಾರೆ. ವಿತರಣೆಯಲ್ಲಿ ರೈತನೊಬ್ಬನಿಗೆ ತಲಾ 10 ಚೀಲದಂತೆ ನಿಗಧಿ ಮಾಡಿದ್ದರೂ, ಅದಿಕಾರಿಗಳು ಒಬ್ಬ ರೈತನಿಗೆ
100ರಿಂದ 600 ಚೀಲ ಡೋಲೋಮೈಟ್ ವಿತರಿಸಿದ್ದಾರೆ. ಇದರಿಂದಾಗಿ ಸಾವಿರಾರು ರೈತರಿಗೆ
ತಮಗೆ ಸಿಗಬೇಕಾದ ಸವಲತ್ತುಗಳಿಂದ ವಂಚಿತರಾಗುವಂತೆ ಮಾಡಿದ್ದಾರೆ.
ಬಿತ್ತನೆ ಬೀಜ
ಸರಕಾರ ಈವರೆಗೂ ಬಿತ್ತನೆ
ಬೀಜಗಳಿಗೆ ಸಹಾಯ ಧನವನ್ನು ನೀಡುವುದೇ ಇಲ್ಲ. ಸರಕಾರ ಮತ್ತು ಅಧಿಕಾರಿಗಳಿಗೆ ಲಾಭವಾಗುವ ಎಲ್ಲಾ
ವಸ್ತುಗಳನ್ನು ಸರಕಾರವೇ ಖರೀದಿಸಿ, ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸುತ್ತದೆ. ಇದರಲ್ಲಿ ಭಾರೀ
ಪ್ರಮಾಣದ ಭ್ರಷ್ಟಾಚಾರ ನಡೆಯುತ್ತದೆ. ಮುಂದಾದರೂ, ಸರಕಾರವು ರೈತರಿಗೆ ಸಹಾಯಧನ ನೇರವಾಗಿ ತಲುಪಲು ಅವರಿಗೆ ಬೇಕಾದ ವಸ್ತು- ವಗೈರೆಗಳನು ನೇರವಾಗಿ
ಖರೀದಿಸಲು ಅವಕಾಶ ನೀಡುವಂತಾಗಬೇಕು. ರೈತರು ಕೃಷಿಹೊಂಡ ನಿರ್ಮಿಸಿದಲ್ಲಿ ಅದರ ವೆಚ್ಚವನ್ನು
ಸಂಪೂರ್ಣ ಸರಕಾರ ನೀಡುವಂತಾಗಬೇಕು.
Wednesday, 28 March 2018
ಕರಿ ಭತ್ತ -‘ಬಂಗಾರ’ದ ಬೆಲೆ ! - Golden vallue for Black Paddy !
ಕರಿ ಭತ್ತಕ್ಕೆ ‘ಬಂಗಾರ’ದ ಬೆಲೆ !
ಬರಹ : ಕೂಡಂಡ ರವಿ.
ಕಿಲೋಗ್ರಾಂಗೆ 250 ರೂಪಾಯಿ !
ಇದೀಗ ಕಪ್ಪು ಬಣ್ಣದ ಅಕ್ಕಿಗೂ ಬಂಗಾರದ ಬೆಲೆ ಬಂದಿದೆ. ವೈಶಿಷ್ಟ್ಯಪೂರ್ಣ ಕಪ್ಪು ಅಕ್ಕಿ ಪ್ರತಿ ಕಿಲೋ ಗ್ರಾಂಗೆ 250ಕ್ಕೂ ಅಧಿಕ ! ಅತಿಶಯೋಕ್ತಿಯೇನಲ್ಲ. ಕಪ್ಪಾಗಿ ಕಾಣುವ ಅಕ್ಕಿಗೂ ಆರೋಗ್ಯವರ್ಧನೆಗೆ ಸಹಕಾರಿ ಎಂಬ ಮನೋಭಾವ ನಿಧಾನವಾಗಿ ಹಲವೆಡೆ ನಿಧಾನವಾಗಿ ವ್ಯಾಪಿಸುತ್ತಿದೆ. ಹಲವರು ವಿವಿಧ ತಳಿಯ ಕಪ್ಪು ಭತ್ತವನ್ನು ಬೆಳೆದು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಆದರೆ, ಬರ್ಮಾ ಕಪ್ಪು ಭತ್ತಕ್ಕೆ ರಾಜ್ಯದಲ್ಲಿ ಅಷ್ಟೇನೂ ಪ್ರಚಾರ ಸಿಕ್ಕಿಲ್ಲ. ತುಂಗಭದ್ರಾ ನದಿಯ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಹಿಂದೆ ವ್ಯಾಪಕವಾಗಿ ಸೋನಾ ಮಸ್ಸೂರಿ ಭತ್ತವನ್ನು ಬೆಳೆಯಲಾಗುತ್ತಿತ್ತು. ಕೆಲ ರೈತರು ವಿವಿಧ ಕಾರಣಗಳಿಂದಾಗಿ ಪರ್ಯಾಯ ಬೆಳೆಗಳತ್ತ ವಾಲುತ್ತಿದ್ದಾರೆ. ಇಂತಹ ಪ್ರಯೋಗ ಮಾಡಿ ಯಶಸ್ವಿಯಾದ ರೈತರೋರ್ವರು ಬರ್ಮಾದ ಕಪ್ಪು ಭತ್ತವನ್ನು ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ.
ಕ್ವಿಂಟಾಲ್‍ಗೆ 10ಸಾವಿರ ರೂಪಾಯಿ
ವಾಡಿಕೆಯಾಗಿ ಕರಾವಳಿ ಭಾಗಗಳಲ್ಲಿ ಬರ್ಮಾ ಕಪ್ಪು ಭತ್ತವನ್ನು ಬೆಳೆಯಲಾಗುತ್ತದೆ. ಆದರೆ, ಇದೀಗ ಶ್ರಮಜೀವಿಯಾದ ಸಿದ್ರಾಮಗೌಡ ಅವರ ಛಲದ ಫಲವಾಗಿ ಅದನ್ನು ಉತ್ತರ ಕರ್ನಾಟಕದಲ್ಲೂ ನೋಡುವಂತಾಗಿದೆ. 2016ರಲ್ಲಿ ಬೆಂಗಳೂರಿನಲ್ಲಿ ಆಯೋಜನೆಗೊಂಡಿದ್ದ ಕೃಷಿ ಮೇಳದಲ್ಲಿ ಗೌಡರ ಗಮನವನ್ನು ಭತ್ತ ಸೆಳೆದಿತ್ತು. ಈ ಭತ್ತವನ್ನು ಹೆಸರಾಂತ ಕಂಪೆನಿಗಳು ಪ್ರತಿ ಕ್ವಿಂಟಾಲ್‍ಗೆ 10ಸಾವಿರ ರೂಪಾಯಿಗೆ ಖರೀದಿ ಮಾಡುತ್ತಿವೆ. ಆದರೆ, ಉತ್ತಮ ಗುಣಮಟ್ಟದ ಈ ಭತ್ತ ಬೆಳೆಯಲು ರಾಸಾಯನಿಕ ಗೊಬ್ಬರದ ಬದಲು ಸಾವಯವ ಗೊಬ್ಬರಗಳನ್ನು ಬಳಸಬೇಕಾಗುತ್ತದೆ. ಅದರಂತೆ , ಗೌಡ್ರರೂ ಕೂಡಾ ಎರೆಗೊಬ್ಬರ, ಪಂಚಗವ್ಯ, ಬೇವಿನ ಕಷಾಯ, ಬೇವಿನ ಬೀಜದ ಪುಡಿಗಳನ್ನು ಬಳಸಿ ಅದರಲ್ಲಿ ಯಶಸ್ಸು ಗಳಿಸಿದ್ದಾರೆ
.
ಕ್ಯಾನ್ಸರ್ ನಿವಾರಕ ಅಕ್ಕಿ:
ಬರ್ಮಾ ಬ್ಲಾಕ್ ಅಕ್ಕಿಯು ಕ್ಯಾನ್ಸರ್ ನಿವಾರಕ, ತೂಕ ಇಳಿಕೆಗೆ ನೆರವು ನೀಡಬಲ್ಲದು. ರಕ್ತದೊತ್ತಡ, ಸಕ್ಕರೆ ಕಾಯಿಲೆ ನಿಯಂತ್ರಣ ಮಾಡುವ ಅಪೂರ್ವ ಶಕ್ತಿಯನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ವಿಟಮಿನ್ “ಬಿ” ಮತ್ತು ಧಾರಾಳ ನಾರಿನಂಶವನ್ನು ಕೂಡಾ ಇದು ಹೊಂದಿದೆ. ಇದರಲ್ಲಿ ಸುಮಾರು 35ಕ್ಕೂ ಅಧಿಕ ತಳಿಗಳಿವೆ. ಸುವಾಸನಾ ಭರಿತ ಅಕ್ಕಿಯನ್ನು ಫಲಾವ್ ಮಾಡಲು ಬಳಸಲಾಗುವುದು. ಚಿಲ್ಲರೆ ಮಾರುಕಟ್ಟೆಯಲ್ಲಿ ಈ ಅಕ್ಕಿಯ ಬೆಲೆ 300 ರೂಪಾಯಿಗೂ ಅಧಿಕವಿದೆ. ಈ ಗುಣಗಳೇ ಈ ಅಕ್ಕಿ ದುಬಾರಿಯಾಗಲು ಪ್ರಮುಖ ಕಾರಣ. ಆನ್‍ಲೈನ್‍ನಲ್ಲಿಯೂ ಈ ಅಕ್ಕಿಯು ಭಾರೀ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ಬೆಲೆ ಸುಮಾರು ಅರ್ಧ ಕಿಲೋ ಗ್ರಾಂಗೆ 195ರೂಪಾಯಿಗೂ ಹೆಚ್ಚು.
ಈ ಭತ್ತದ ತಳಿಯನ್ನು ನಮ್ಮ ಜಿಲ್ಲೆಯಲ್ಲಿಯೂ ಯಶಸ್ವಿಯಾಗಿ ಬೆಳೆಸಬಹುದೇ ಎಂಬ ಬಗ್ಗೆ ಆಸಕ್ತ ರೈತಾಪಿ ವರ್ಗದವರು ಪ್ರಯೋಗಶೀಲರಾಗಬೇಕಿದೆ. ಅದು ಯಶಸ್ವಿಯಾದಲ್ಲಿ ರೈತಾಪಿ ವರ್ಗದವರು ಆರ್ಥಿಕವಾಗಿ ‘ಸಬಲ’ರಾದಂತೆ ಸರಿ. ಹಾಗಾದರೂ, ಪಾಳು ಬಿಟ್ಟ ಗದ್ದೆಗಳಲ್ಲಿ ಮತ್ತೆ ಭತ್ತ ತೆನೆ ಕಾಣಬಹುದೇನೋ ? ಬೀಜದ ಭತ್ತಕ್ಕಾಗಿ “ಕೃಷಿ ಮೇಳ” ಗಳಲ್ಲಿ ಪ್ರಯತ್ನಿಸಬಹುದು.
ಭತ್ತದ ಬೀಜಗಳು ಆನ್ ಲೈನ್ ನಲ್ಲಿ ಸಿಗುತ್ತದೆ. ಆದರೆ, ದುಬಾರಿ. 100 ಮತ್ತು ಸಾವಿರ ಬೀಜಗಳ ಪೊಟ್ಟಣಗಳು ಸಿಗುತ್ತದೆ.
ಯೂರಿಯಾದ ಬದಲಿ “ಆಡುಸೋಗೆ “ ! Natural Manure..........
ಯೂರಿಯಾದ ಬದಲಿಯಾಗಿ “ಆಡುಸೋಗೆ “ ಬಳಸಿ. Justicia adhatoda
ಬರಹ : ಕೂಡಂಡ ರವಿ, ಹೊದ್ದೂರು, ಕೊಡಗು
“ಆಡುಸೋಗೆ”
ಔಷಧೀಯ ಗುಣಗಳನ್ನು ಮೈತುಂಬಿಕೊಂಡಿರುವ ಸಸ್ಯ. ಭಾರತ ದೇಶದ ವಿವಿಧೆಡೆ ಧಾರಾಳವಾಗಿ ಕಾಣ ಬರುತ್ತದೆ. ಆದರೂ, ಕೆಲವೆಡೆ ಇದು
ಜನತೆಗೆ ಇನ್ನೂ ತಿಳಿಯದ ಸಸ್ಯವಾಗಿದೆ. ಇತ್ತೀಚೆಗೆ ಸಾಮಾಜಿಕ
ಮಾಧ್ಯಮದಲ್ಲಿ ಫೇಸ್ ಬುಕ್ ನ ಕೃಷಿ ಗುಂಪನಲ್ಲಿ ಈ
ಕುರಿತಾಗಿ ತುಮಕೂರು ಜಿಲ್ಲೆಯ ಪ್ರಗತಿಪರ ಕೃಷಿಕರು ಮಾಹಿತಿ ಬಗ್ಗೆ ಕೇಳಿದ್ದರು. ಈ ಹಿನ್ನೆಲೆಯಲ್ಲಿ ಈ ಲೇಖನ ಬರೆದೆ.
ಗಿಡವನ್ನು ಗುರುತಿಸುವುದು ಹೇಗೆ ?
ಒಂದರಿಂದ
ನಾಲ್ಕು ಮೀಟರ್ ಎತ್ತರ ಬೆಳೆಯುವ ಹಸಿರು ಕಾಂಡವ ಗಿಡ. ಇದರ
ಎಲೆಗಳು ಮಾವಿನೆಲೆಯನ್ನು ಹೋಲುತ್ತದೆ. ಆದರೆ ಮೃದು ಮತ್ತು ನುಣುಪಾಗಿರುತ್ತದೆ. ಎಲೆಗಳು ಕೆಳಗಡೆ ವಾಲಿರುತ್ತವೆ.
ಎಲೆಗಳ ತೊಟ್ಟು ಕಾಂಡಕ್ಕೆ ಸೇರುವ ತ್ರಿಕೋನದಲ್ಲಿ ಹೂ ಗೊಂಚಲು ಬಿಡುವುದು. ಪುಷ್ಪಪಾತ್ರೆ ಹೂವಿನ
ತೊಟ್ಟಿನ ತುದಿಯಲ್ಲಿರುವುದು. ಇದರ ಮೇಲೆ ಹೂವುಗಳು ಗುಂಪಾಗಿ ತೆನೆಯಂತಿರುತ್ತದೆ. ಹೂವಿನ
ಗುಚ್ಛವು ಬಿಳಿ ವರ್ಣದ್ದಾಗಿದ್ದರೂ, ಅಲ್ಲಲ್ಲಿ ತಿಳಿ ನೇರಳೆ ಅಥವಾ ತಿಳಿ ಗುಲಾಬಿ ಬಣ್ಣವಿರುವುದು. ಕಾಯಿ ಚಪ್ಪಟೆಯಾಗಿರುತ್ತದೆ. ಇದರ ಒಳಗಡೆ
ನಾಲ್ಕು ಬೀಜಗಳು ಇರುತ್ತವೆ. ಸಾಮಾನ್ಯವಾಗಿ ಪ್ರತಿ ಹಳ್ಳಿಯಲ್ಲಿಯೂ ಈ ಗಿಡವನ್ನು ಕಾಣಬಹುದಾಗಿದೆ.
ಇದರ ಎಲೆಗಳು ಸಿಂಹದ ಹಸ್ತದಂತಿರುತ್ತವೆ. ಆದುದರಿಂದ ಈ ಮೂಲಿಕೆಗೆ “ಸಿಂಹಪರ್ಣಿ” ಎಂದು
ಸಂಸ್ಕ್ರತ ಗ್ರಂಥದಲ್ಲಿ ತಿಳಿಸುತ್ತವೆ. ಇದರಲ್ಲಿ ‘ವ್ಯಾಸಿಸೈನ್’ ಎನ್ನುವ
ಕಟು ಕಹಿ ಕ್ಷಾರವಿರುತ್ತದೆ. ಇದು ಉಸಿರಾಟದ ಶ್ವಾನನಾಳಗಳ ವ್ಯಾಧಿಯನ್ನು ಗುಣಪಡಿಸುವುದರಲ್ಲಿ
ಗಮನಾರ್ಹ ಪಾತ್ರವನ್ನು ವಹಿಸುತ್ತದೆ. ವಸಾಕ ಅನ್ನುವುದು ಮತ್ತೊಂದು ಹೆಸರು. ಜೇನು ಹುಳಗಳು ಅತಿಯಾಗಿ ಬಯಸುವ ಮಕರಂದ ಭರಿತ ಪುಷ್ಪ
ಬಿಡುವ ಗಿಡ.
ಸದಾ ಹಸಿರು ಭರಿತ ಗಿಡವಿದು.
ಕವಲುಗಳಿಂದ ತುಂಬಿರುತ್ತದೆ. ಸದಾ ಹಸುರಾಗಿರುವ ದಟ್ಟವಾದ
ಪೊದೆಯಂತಿರುವ ಸಸ್ಯರಾಶಿ. ಗಿಡದ ಎಲೆಗಳು ಅಗಲವಾಗಿದ್ದು ತುದಿಯಲ್ಲಿ ಚೂಪಾಗಿರುವುದು ಇದರ ವಿಶೇಷ.
ಎರಡು ದಳಗಳ ಬಿಳಿಹೂಗಳು ಒತ್ತೊತ್ತಾಗಿ ಕವಲುಗಳ ತುದಿಯಲ್ಲಿ ಕಾಣಿಸುತ್ತವೆ. ನಮ್ಮದೇಶದ ಉಷ್ಣವಲಯ
ಹಾಗೂ ಸಮಶೀತೋಷ್ಣವಲಯದಲ್ಲಿ ವರ್ಶವಿಡೀ ಸ್ವಾಭಾವಿಕವಾಗಿ ಬೆಳೆಯುತ್ತವೆ. ಪೊದೆಯಂತೆ ದಟ್ಟವಾಗಿ
ಬೆಳೆಯುವ ಗುಣವುಳ್ಳ ಈ ಸಸ್ಯವನ್ನು ಹೊಲದ ಬೇಲಿಯಲ್ಲೂ, ಮನೆಯ
ಕಾಂಪೌಂಡ್ ಬಳಿಯಲ್ಲೂ ಬೆಳೆಸಬಹುದಾದ ಸಸ್ಯ. ಸಾಮಾನ್ಯವಾಗಿ ೨ ಮೀ ಎತ್ತರ. ಒಂಟಿ ಸಸ್ಯವಾಗಿ
ಬೆಳಸಿದರೆ, ೧.೫ ಚ.ಮೀ ಸ್ಥಳಾವಕಾಶ ಇರಬೇಕು. ಕುಂಡದಲ್ಲಿ ಬೆಳೆಸುವಹಾಗಿದ್ದರೆ, ೨೫-೩೦
ಸೆಂ. ಮೀ.ಸುತ್ತಳತೆಯ ವಾಗಿದ್ದರೆ ಉತ್ತಮ. ಎಲ್ಲಾ ಸಸ್ಯಗಳು ಬಯಸುವ ಸೂರ್ಯಬೆಳಕು ಇದಕ್ಕೂ ಅಗತ್ಯ.
ಆದರೂ ನೆರಳಿನಲ್ಲೂ ಬೆಳೆಸಲು ಅಡ್ಡಿಯಿಲ್ಲ. ಮನೆಯ 'ವರಾಂಡ'ದಲ್ಲಿ ಅಥಾ
ದೊಡ್ಡ ಮರಗಳ ನೆರಳಿನಲ್ಲೂ ಬೆಳೆಸಬಹುದು.
ವಾರಕ್ಕೆ ಎರಡು
ಬಾರಿ ನೀರು
ಈ ಸಸ್ಯಕ್ಕೆ ಸಹಜವಾದ ಗಡಸು ಗುಣವಿದೆ.
ಆಗಾಗ್ಯೆ ನೀರು ಚುಮುಕಿಸಿದರೆ ಸಾಕು. ಒಂದುವೇಳೆ ಕುಂಡದಲ್ಲಿ ಬೆಳೆಸಿದರೆ, ವಾರಕ್ಕೆರಡು
ಬಾರಿಯಾದರೂ ನೀರು ಉಣಿಸುವುದು ಒಳ್ಳೆಯದು. ಸಸ್ಯವನ್ನು ಸೊಂಪಾಗಿ ಬೆಳೆಸಲು ಮತ್ತು ಅದರ
ಆಕಾರವನ್ನು ನಿಯಂತ್ರಿಸಲು ಕೊಂಬೆಗಳನ್ನು ಆಗಾಗ ಕಡಿಯುವುದು ಒಳ್ಳೆಯದು. ಬಲಿತ ಎಲೆಗಳನ್ನು ನಮಗೆ
ಬೇಕಾದಾಗ ಕಿತ್ತು ಬಳಸಬಹುದು. ಸರಿಯಾಗಿ ಪೋಷಿಸಿದರೆ ಗಿಡ ಹೆಚ್ಚು ಕಾಲ ಎಲೆಗಳನ್ನು ಬಿಡುತ್ತಾ
ಹೋಗುತ್ತದೆ. ಸೋಗೆ ಗಿಡದ ಎಲೆಗಳನ್ನು ಅಗತ್ಯವಿದ್ದಾಗ ಕಿತ್ತುನೆರಳಿನಲ್ಲಿ ಚೆನ್ನಾಗಿ ಒಣಗಿಸಿ
ಪುಡಿಮಾಡಿ ಡಬ್ಬಿಗಳಲ್ಲಿ ತುಂಬಿಟ್ಟುಕೊಳ್ಳಬಹುದು.
ಸಸ್ಯಾಭಿವೃದ್ಧಿ ಹೇಗೆ ?
ಇದನ್ನು ಬೆಳೆಯುವುದು ತೀರಾ ಸುಲಭ. ಇದರ ಬಲಿತ ಎರಡು ಗಿಣ್ಣುಗಳಿರುವ
ತುಂಡನ್ನು ತೆಗೆದುಕೊಳ್ಳಿ. ಅದನ್ನು ನಿಮಗೆ ಅನಿಸಿದ ಕಡೆ ನೆಡಿ. ನೀರು- ಗೊಬ್ಬರ
ಕೊಟ್ಟರೆ ಕೆಲವೇ ದಿನಗಳಲ್ಲಿ ನೀವೇ ಆಶ್ಚರ್ಯ ಪಡುವ ರೀತಿ ಬೆಳೆಯುತ್ತದೆ. ಪ್ರತಿ ಗಿಣ್ಣಿನಲ್ಲಿಯೂ ಚೆನ್ನಾಗಿ ಬೇರು ಬರುತ್ತದೆ. ಕೇರಳ,
ಕೊಡಗು, ದಕ್ಷಿಣ ಮತ್ತು ಉತ್ತರ ಕನ್ನಡದಲ್ಲಿ ಕಾಣ
ಬರುತ್ತದೆ. ಕೆಲ ಆಸಕ್ತರು ಬೇರೆಡೆಯಿಂದ ತಂದು ಬೆಳೆಸಿ, ಬಳಸುತ್ತಿದ್ದಾರೆ. ನಿಮಗೇನಾದರೂ ಇದನ್ನು ಬೆಳೆಯುವ ಆಸಕ್ತಿ
ಇದ್ದರೆ, ಹತ್ತಾರು ತುಂಡುಗಳಿದ್ದರೆ ಸಾಕು. ನಿಮ್ಮ
ಆಸಕ್ತಿಗೆ ತಕ್ಕಂತೆ ಬೆಳೆಸಬಹುದಾಗಿದೆ. ಸಸ್ಯಕ್ಷೇತ್ರದಲ್ಲೂ ಬೆಳೆದು
ನೆಡಬಹುದು. ಧಾರಾಳವಾಗಿ ಸೊಪ್ಪು ದೊರೆಯುವುದರಿಂದ ಪ್ರಗತಿ ಪರ ಕೃಷಿಕರು
ಇದನ್ನು ಗೊಬ್ಬರ ಬಳಕೆಗೆ ಬಳಸುವರು.
ಕೃಷಿಯಲ್ಲಿ ಬಳಕೆ
ಹೇಗೆ ?
ಇದು ಎಲ್ಲಾ
ವಾತವರಣಕ್ಕೆ ಹೊಂದಿಕೊಂಡು ಸೊಂಪಾಗಿ ಬೆಳೆಯುತ್ತದೆ. ಈ ಗುಣದಿಂದಾಗಿಯೇ ಇದನ್ನು ಜೀವಂತ ಬೇಲಿ ನಿರ್ಮಾಣಕ್ಕೆ ಹಲವಾರು ಕಡೆ ಬಳಸಲಾಗುತ್ತದೆ.
ಇದರ ವಿಶೇಷ ಗುಣವೆಂದರೆ, ಇವುಳನ್ನು ಆಡು , ಕುರಿ ಸೇರಿದಂತೆ ಯಾವುದೇ ರಾಸುಗಳು ತಿನ್ನುವುದಿಲ್ಲ. ಕಾಡು
ಪ್ರಾಣಿಗಳು ಸಹಾ ಇದನ್ನು ತಿನ್ನುವುದಿಲ್ಲ. ಧಾರಾಳವಾಗಿ ದೊರಕುವ
ಸೊಪ್ಪನ್ನು ಕೃಷಿ ಉದ್ಧೇಶಗಳಿಗಾಗಿ ಭಾರತದ ಬಹುತೇಕ ಕಡೆ ಬಳಸಲಾಗುತ್ತದೆ. ಇದು ಕೃಷಿಗೆ ಧಾರಾಳವಾಗಿ ಸಾರಜನಕವನ್ನು ನೀಡುತ್ತದೆ. ಮಳೆಗಾಲದಲ್ಲಿ
ಚೆನ್ನಾಗಿ ಚಿಗುರುವುದರಿಂದ ಪ್ರತಿ 15- 20 ದಿನಗಳಿಗೊಮ್ಮೆ ಕತ್ತರಿಸಿ,
ಸಾವಯವ ಗೊಬ್ಬರಕ್ಕೆ ಬಳಸಬಹುದು. ಧಾರಾಳವಾಗಿ ನೀರಿನ ಲಭ್ಯತೆ ಇದ್ದಲ್ಲಿ ಇದರಿಂದ ವರ್ಷದ
ಎಲ್ಲಾ ತಿಂಗಳಲ್ಲಿ ಧಾರಾಳವಾಗಿ ಸೊಪ್ಪನ್ನು ಪಡೆಯಬಹುದು. ವ್ಯವಸಾಯಕ್ಕೆ
ಯೋಗ್ಯವಲ್ಲದ ಕಲ್ಲು – ಬಂಡೆಗಳಿರುವ ಪ್ರದೇಶ, ಬೇಲಿ, ಮುಂತಾದಡೆ ಬೆಳೆಸಿ
ಬಳಸಬಹುದು.
ಇದು ಬಹುತೇಕ
ಹಸಿರೆಲೆಗಳಂತೆ ಸಗಣಿ, ಗಂಜಲದೊಡನೆ ಬೆರೆತು ಬೇಗನೆ ಕೊಳೆಯುತ್ತದೆ. ಪದರ ಪದರವಾಗಿ ಇದನ್ನು ಮತ್ತು ಸಗಣಿ, ಗಂಜಲ, ಮಣ್ಣು, ಇತರ ಕಸ ಕಡ್ಡಿಗಳೊಡನೆ ಸೇರಿಸಿ ಕೊಳೆತ ನಂತರ ಎಲ್ಲಾ
ಬೆಳೆಗಳಿಗೂ ಬಳಸಬಹುದು. ಇದರ ಧಾರಾಳ ಬಳಕೆಯಿಂದ ಕೃಷಿಗೆ ಯೂರಿಯಾ
ಗೊಬ್ಬರ ಬಳಕೆಯನ್ನು ಹಂತ- ಹಂತವಾಗಿ ಕಡಿಮೆ ಮಾಡಿ ನಿಲ್ಲಿಸಬಹುದು.
ಹಸಿ ಸೊಪ್ಪನ್ನು ಬೇಸಾಯ ಮಾಡುವ ಭೂಮಿಗೆ ನೇರವಾಗಿ
ಹಾಕಿ ಉಳುಮೆ ಮಾಡಿಯೂ ಕೊಳೆಸಬಹುದಾಗಿದೆ. ಬಾಂಗ್ಲಾ ದೇಶದಲ್ಲಿ ಇದನ್ನು ಔಷಧೀಯ
ಮತ್ತು ಕೃಷಿ ಉದ್ಧೇಶಗಳಿಗಾಗಿ ಬಳಸಲಾಗುತ್ತದೆ.
ಕಾಯಿಲೆಗಳಿಗೆ
ರಾಮಬಾಣ
ಉಷ್ಣಗುಣವನ್ನು ಹೊಂದಿದ ಈ ಸಸ್ಯ, ನೆಗಡಿ,ಕೆಮ್ಮು
ಮುಂತಾದ ಸಾಮಾನ್ಯ ಕಾಯಿಲೆಗಳಿಗೆ ರಾಮಬಾಣದಂತಿದೆ. ಆಡುಸೋಗೆ ಸೊಪ್ಪನ್ನು ಉಪಯೋಗಿಸಿ ಕಷಾಯವನ್ನು
ಮಾಡುತ್ತಾರೆ. ಸ್ವಲ್ಪ ಕಹಿಯಾಗಿರುವ ಸೊಪ್ಪಿನ
ರಸ ಔಷಧೀಯ ಖಜಾನೆಯನ್ನೇ
ಹೊಂದಿದೆ.
'ಸೋಗೆ ಗಿಡ'ದ ಎಲೆಗಳಲ್ಲದೆ, ತೊಗಟೆ, ಬೇರು, ಹೂವುಗಳೆಲ್ಲವೂ
ಉಪಯೋಗಕ್ಕೆ ಬರುವುದರಿಂದ ಪುಡಿ ತಯಾರಿಸಿ ಶೇಖರಿಸಿಡಬಹುದು. ಎಲೆ ಪುಡಿಯ ಕಷಾಯ ಗಾಯವನ್ನು
ಗುಣಪಡಿಸುತ್ತದೆ. ಅಸ್ತಮಾ, ನೆಗಡಿ, ಕೆಮ್ಮು, ಮುಂತಾದ
ರೋಗಗಳಿಗೆ ದಿವ್ಯೌಷಧಿಯೆಂದು ನಂಬುತ್ತಾರೆ. ಹೆಚ್ಚಾಗಿ ದಮ್ಮು ಕೆಮ್ಮು ಇದ್ದಾಗ, ಎಲೆಗಳನ್ನು
ಬಾಡಿಸಿ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ಕುಡಿದರೆ ಬೇಗನೆ ವಾಸಿಯಾಗುತ್ತದೆಯೆಂದು ಆಯುರ್ವೇದ
ವೈದ್ಯರು ಹೇಳುತ್ತಾರೆ. ಇದು ಭೇದಿಗೆ ಅತ್ಯುತ್ತಮ ಮದ್ದು ಸಹಿತ. ಮನೆಯಲ್ಲಿ ಬೇರೆಗಿಡಗಳ ಜೊತೆಗೆ
ಈ ಗಿಡವನ್ನೂ ನೆಡುವುದು ಒಳ್ಳೆಯದು. ಈ ವನಸ್ಪತಿಯನ್ನು 'ಆಡುಮುಟ್ಟದ
ಸೊಪ್ಪು' ಎಂದು ಕರೆಯುತ್ತಾರೆ.
ಬೇರು, ತೊಗಟೆ ಮತ್ತು ಎಲೆಗಳು ಕೆಮ್ಮು, ಆಸ್ತಮಾಗಳ
ನಿವಾರಣೆಗೆ ಉಪಯುಕ್ತವಾಗಿವೆ. ಉಸಿರಾಟವನ್ನು ಸುಗಮಗೊಳಿಸುತ್ತದೆ. ಇದು ರಕ್ತಸ್ರಾವ
ನಿಯಂತ್ರಕವಾಗಿ
ಕೂಡಾ ಬಳಸಲಾಗುತ್ತದೆ. ಮೂತ್ರವರ್ಧಕ , ಮತ್ತು
ನಂಜುನಾಶಕ ಗುಣಗಳನ್ನು ಹೊಂದಿದೆ. ಮಲೇರಿಯಾ ಜ್ವರ ಮತ್ತು ಡಿಪ್ತಿರಿಯಾದ
ಚಿಕಿತ್ಸೆಯಲ್ಲಿ ಪುಡಿಮಾಡಿದ ಮೂಲವನ್ನು ಬಳಸಲಾಗುತ್ತದೆ. ಗೊನೊರಿಯಾ ಮತ್ತು ಸಂಧಿವಾತದಲ್ಲಿ
ಉಪಯುಕ್ತ. ಅಸ್ತಮ
ರೋಗಿಗಳು ಒಣಗಿದ ಎಲೆಗಳನ್ನು ಸಿಗರೇಟ್
ಗಳಾಗಿ ತಯಾರಿಸಿ ಬಳಸುವರು. ಭೇದಿ ನಿವಾರಕವಾಗಿ ಬಳಸಲಾಗುತ್ತದೆಎಲ್ಲಾ ಶೀತ ಸಂಬಂಧಿತ ರೋಗಗಳಿಗೆ ಪರಿಣಾಮಕಾರಿಯಾಗಿದೆ. ಇದು ಅಜೀರ್ಣ, ಚರ್ಮದ ಕಾಯಿಲೆಗಳು ಔಷಧವಾಗಿಯೂ
ಬಳಸಲಾಗುತ್ತದೆ. .( ಆದರೆ, ನೀವು
ತಜ್ಞರ ಸಲಹೆ ಇಲ್ಲದೆ, ಇದರ ಔಷಧಿಯನ್ನು ಬಳಸಲೇ ಬೇಡಿ. )
ಇದು ಪಾಕಿಸ್ತಾನದ
ಪಂಜಾಬ್ ಪ್ರಾಂತ್ಯದ ಅನಧಿಕೃತ ಪ್ರಾಂತೀಯ ಹೂವಾಗಿದೆ.
Friday, 23 March 2018
Natural Tooth Powder 'ಉಮ್ಮಿ ಕರಿ'
ಸ್ವದೇಶಿ ಹಲ್ಲು ಪುಡಿ-'ಉಮ್ಮಿ ಕರಿ'
ಸಚಿತ್ರ ಬರಹ: ಕೂಡಂಡ ರವಿ
ಗರಗರನೇ ಕಾಲಚಕ್ರ ಉರುಳಿದಂತೆ, ನಾವೂ ಅರಿತೋ ಅರಿಯದೆಯೋ ಅದರೊಡನೆ ಸಾಗುತ್ತಿರುತ್ತೇವೆ. ಅಧುನಿಕತೆ ಎಂಬ ಹೆಸರಿನಲ್ಲಿ ನಾವು ನಮ್ಮ ಪೂರ್ವಜರು ಬಳಸಿದ ಬಳಸುತ್ತಿದ್ದಂತಹ ಹತ್ತಾರು ನೂರಾರು ಪ್ರಯೋಜನಕಾರಿ ಮಾನವನಿಗೆ ಹಿತಕಾರಿಯಾಗಿದ್ದಂತಹ ವಸ್ತು- ವಗೈರೆಗಳನ್ನು ದೂರ ಮಾಡುತ್ತಾ ಬಂದಿದ್ದೆವು.
ಇದರಲ್ಲಿ ಬಹುರಾಷ್ಟೀಯ ಕಂಪೆನಿಗಳ ಪಾಲು ಹೆಚ್ಚಿನದ್ದಾಗಿತ್ತು. ಉದಾಹರಣೆಗಾಗಿ ನಮ್ಮ ಪೂರ್ವಜರು, ಹಿರಿಯರು ಹಲ್ಲುಗಳನ್ನು ಶುಭ್ರವಾಗಿಡಲು ಬಳಸುತ್ತಿದ್ದ ಇಟ್ಟಿಗೆ ಪುಡಿ, ಇದ್ದಿಲು, ಮಾವಿನ ಸೊಪ್ಪು, ಬೇವಿನ ಸೊಪ್ಪು ಮತ್ತಿತರ ವಸ್ತುಗಳನ್ನು ವಿದೇಶಿಗರು -ಅದೆಲ್ಲಾಹೊಲಸು-ಗಲೀಜು ಎಂದರು. ನಮ್ಮ ಜನತೆ ನಂಬಿದರು. ಇದನ್ನೇ ಬಂಡವಾಳವನ್ನಾಗಿಸಿದ ಬಹುರಾಷ್ಟೀಯ ಕಂಪೆನಿಗಳು ನಮ್ಮ ದೇಶವನ್ನೇ ಬೃಹತ್ ಮಾರುಕಟ್ಟೆಯನ್ನಾಗಿಸಿಕೊಂಡು ಅವರು ಬೆಳೆದರು. ನಮ್ಮ ದೇಶದ ಜನತೆಯನ್ನು ಶೋಷಿಸಿದರು. ಆದರೆ, ಕ್ರಮೇಣ ನಮ್ಮ ಪೂರ್ವಜರು ಬಳಸುತ್ತಿದ್ದ ವಸ್ತುಗಳ ಮಹತ್ವ, ನಮ್ಮ ಜೀವನದಲ್ಲಿ ಅವುಗಳ ಪ್ರಾಮುಖ್ಯತೆ ಇಂದಿನ ಜನಾಂಗದ ಅರಿವಿಗೆ ಬರಲಾರಂಭವಾಗಿದೆ. ಈ ನಿಟ್ಟಿನಲ್ಲಿ ದೇಶದ ಸಣ್ಣಪುಟ್ಟ ಪಟ್ಟಣಗಳಿಗೂ ಸಹಾ ಪತಂಜಲಿ ಉತ್ಪನ್ನಗಳು ದಾಂಗುಡಿ ಇಡುತ್ತಿವೆ. ಬಹುತೇಕ ಜನತೆಯಲ್ಲಿ ತಡವಾಗಿಯಾದರೂ ಸ್ವದೇಶಾಭಿಮಾನ ಬೆಳೆಯಲಾರಂಭವಾಗಿವೆ.
ಇದೇ ರೀತಿಯಲ್ಲಿ ಜನತೆಯ ಮನೋಭಾವ ಬದಲಾಗಲಾರಂಭವಾಗಿವೆ. ನಾವು ನಮ್ಮದೇ ಆದ ಪುರಾತನ ಕಾಲದಲ್ಲಿ ಬಳಕೆಯಲ್ಲಿದ್ದ ವಸ್ತುಗಳನ್ನು ಆರೋಗ್ಯವಂತ ಸಮಾಜಕ್ಕಾಗಿ ಬಳಸಬೇಕು ಎಂಬ ಕಾಳಜಿ ಹೆಚ್ಚಾಗುತ್ತಿದೆ.
ಅದಕ್ಕೊಂದು ತಾಜಾ ಉದಾಹರಣೆ ಇಲ್ಲಿದೆ.
ಮಾರುಕಟ್ಟೆಗೆ ಬಂತು ಇದ್ದಿಲು...!
'ದೇವರ ನಾಡು' ಎಂದು ತಮ್ಮ ರಾಜ್ಯವನ್ನು ಕರೆದುಕೊಳ್ಳುತ್ತಿರುವ ಕೇರಳಿಗರು ದೇವರೇ ಮೂಗಿನ ಮೇಲೆ ಬೆರಳಿಡುವ ಈ ಸಾಹಸಕ್ಕೆ ಕೈ ಹಾಕಿದ್ದಾರೆ ! ಸುಮಾರು ಒಂದುವರ್ಷದ ಹಿಂದೆ ಈ ಕಾರ್ಯ ಆರಂಭವಾಗಿದೆ. ವಿದೇಶಿ ಟೂತ್ಪೇಸ್ಟ್ ಕಂಪೆನಿಗಳಿಗೆ ಸೆಡ್ಡು ಹೊಡೆದು, ಸ್ವದೇಶಿಯ ಅಭಿಮಾನ ಹುಟ್ಟಿಸುವಲ್ಲಿ ಕೆಲವು ಕ್ರಿಯಾಶೀಲ ಯುವಕರು ತಮ್ಮನ್ನು ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ಪುರಾತನ ಕಾಲದಲ್ಲಿ ಬಳಕೆಯಲ್ಲಿದ್ದ ಭತ್ತದ ಹೊಟ್ಟಿನ ಇದ್ದಿಲಿನ ಪುಡಿಗೆ ಮರು ಕಾಯಕಲ್ಪ ನೀಡಿ, ತಮ್ಮ ಉದರಪೋಷಣೆಯನ್ನು ಮಾಡಲು ಆರಂಭಿಸಿದ್ದಾರೆ ! ಅದರಂತೆ ಅವರು ಅಪ್ಪಟ ಸ್ವದೇಶಿಯ ಹಲ್ಲು ಬೆಳಗುವ ಪುಡಿಯನ್ನು ಮಾರುಕಟ್ಟೆಗೆ ಬಿಟ್ಟಿದ್ದಾರೆ. 30 ಗ್ರಾಂ ಭತ್ತದ ಹೊಟ್ಟಿನ ಇದ್ದಿಲು(ಉಮ್ಮಿಕರಿ)ಗೆ ಕೇವಲ 5ರೂಪಾಯಿ ಬೆಲೆ ಇದೆ. ಸ್ಥಳೀಕ ಹಿರಿಯರು ತಮಗೆ ಪುರಾತನ ಕಾಲದ ಹಲ್ಲುಪುಡಿ ಮತ್ತೆ ದೊರೆತ ಸಂತೋಷದಲ್ಲಿ ಅದನ್ನು ಬಳಸುತ್ತಿದ್ದಾರೆ. ಕಿರಿಯರೂ ಅವರನ್ನು ಅನುಸರಿಸುತ್ತಿದ್ದಾರೆ. ಈ ರೀತಿಯ ವಿನೂತನ ಪ್ರಯತ್ನಗಳು ನಮ್ಮಲ್ಲೂ ಆರಂಭವಾದರೆ ನಿರುದ್ಯೋಗ ಸಮಸ್ಯೆಯೂ ನಿವಾರಣೆಯಾದೀತು. ನಮ್ಮ ಹಲ್ಲು-ವಸಡುಗಳು ಸುದೀರ್ಘ ಕಾಲ ಆರೋಗ್ಯವಾಗಿರಬಲ್ಲವು.
ಇನ್ನೇಕೆ ತಡ. ಉದ್ಯೋಗವಿಲ್ಲ ಎಂದು ಕೊರಗುವವರು ಈ ನಿಟ್ಟಿನಲ್ಲಿ ಪ್ರಯತ್ನ ಪಡಬಹುದು.ಶುಭ್ಯಸಂ ಶೀಘ್ರಂ !
Subscribe to:
Posts (Atom)
ಹನಿ ನೀರೂ ಬಂಗಾರ...! Drop of water is Gold .......!
ಹನಿ ನೀರೂ ಬಂಗಾರ...! Pl watch my these blogs. Kodagu Darshini : http://koodanda.blogspot.com/ Kodagu Darshini (Kodagina Antaranga):...
-
ಕನ್ನಡದ ಕೊಲೆಗಾರ-ಇಮೋಜಿ... ಬರಹ: ಕೂಡಂಡ ರವಿ.ಹೊದ್ದೂರು. < ಭರತ ಭೂಮಿ ಎಂಬ ಪುಣ್ಯನಾಡಿನಲ್ಲಿ ಕನರ್ಾಟಕವೆಂಬ ಕಾನನದಲ್ಲಿ ಕನ್ನಡವೆಂಬ ರಾಜಮಾತೆಯು ಸುಮಾರು ಎರಡು ...
-
ಸ್ವದೇಶಿ ಹಲ್ಲು ಪುಡಿ-'ಉಮ್ಮಿ ಕರಿ' ಸಚಿತ್ರ ಬರಹ: ಕೂಡಂಡ ರವಿ ಗರಗರನೇ ಕಾಲಚಕ್ರ ಉರುಳಿದಂತೆ, ನಾವೂ ಅರಿತೋ ಅರಿಯದೆಯೋ ಅದರೊಡನೆ ಸಾಗುತ್ತ...
-
ಯೂರಿಯಾದ ಬದಲಿಯಾಗಿ “ ಆಡುಸೋಗೆ “ ಬಳಸಿ. Justicia adhatoda ಬರಹ : ಕೂಡಂಡ ರವಿ, ಹೊದ್ದೂರು, ಕೊಡಗು “ ಆ...