Wednesday, 28 March 2018

ಯೂರಿಯಾದ ಬದಲಿ “ಆಡುಸೋಗೆ “ ! Natural Manure..........


 ಯೂರಿಯಾದ ಬದಲಿಯಾಗಿ “ಆಡುಸೋಗೆ  ಬಳಸಿ.    Justicia adhatoda 

 

 


              ಬರಹ : ಕೂಡಂಡ ರವಿ, ಹೊದ್ದೂರು, ಕೊಡಗು 



ಆಡುಸೋಗೆ   ಔಷಧೀಯ ಗುಣಗಳನ್ನು ಮೈತುಂಬಿಕೊಂಡಿರುವ ಸಸ್ಯ. ಭಾರತ ದೇಶದ ವಿವಿಧೆಡೆ ಧಾರಾಳವಾಗಿ ಕಾಣ ಬರುತ್ತದೆ. ಆದರೂ, ಕೆಲವೆಡೆ ಇದು ಜನತೆಗೆ ಇನ್ನೂ ತಿಳಿಯದ ಸಸ್ಯವಾಗಿದೆ. ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ  ಫೇಸ್ ಬುಕ್ ನ ಕೃಷಿ ಗುಂಪನಲ್ಲಿ ಈ ಕುರಿತಾಗಿ ತುಮಕೂರು ಜಿಲ್ಲೆಯ ಪ್ರಗತಿಪರ ಕೃಷಿಕರು ಮಾಹಿತಿ ಬಗ್ಗೆ ಕೇಳಿದ್ದರು. ಈ ಹಿನ್ನೆಲೆಯಲ್ಲಿ ಈ ಲೇಖನ ಬರೆದೆ.



ಗಿಡವನ್ನು ಗುರುತಿಸುವುದು ಹೇಗೆ ?
 ಒಂದರಿಂದ ನಾಲ್ಕು ಮೀಟರ್ ಎತ್ತರ ಬೆಳೆಯುವ ಹಸಿರು ಕಾಂಡವ ಗಿಡ. ಇದರ ಎಲೆಗಳು ಮಾವಿನೆಲೆಯನ್ನು ಹೋಲುತ್ತದೆ. ಆದರೆ ಮೃದು ಮತ್ತು ನುಣುಪಾಗಿರುತ್ತದೆ. ಎಲೆಗಳು ಕೆಳಗಡೆ ವಾಲಿರುತ್ತವೆ. ಎಲೆಗಳ ತೊಟ್ಟು ಕಾಂಡಕ್ಕೆ ಸೇರುವ ತ್ರಿಕೋನದಲ್ಲಿ ಹೂ ಗೊಂಚಲು ಬಿಡುವುದು. ಪುಷ್ಪಪಾತ್ರೆ ಹೂವಿನ ತೊಟ್ಟಿನ ತುದಿಯಲ್ಲಿರುವುದು. ಇದರ ಮೇಲೆ ಹೂವುಗಳು ಗುಂಪಾಗಿ ತೆನೆಯಂತಿರುತ್ತದೆ. ಹೂವಿನ ಗುಚ್ಛವು ಬಿಳಿ ವರ್ಣದ್ದಾಗಿದ್ದರೂ,  ಅಲ್ಲಲ್ಲಿ ತಿಳಿ ನೇರಳೆ ಅಥವಾ ತಿಳಿ ಗುಲಾಬಿ ಬಣ್ಣವಿರುವುದು. ಕಾಯಿ ಚಪ್ಪಟೆಯಾಗಿರುತ್ತದೆ. ಇದರ ಒಳಗಡೆ ನಾಲ್ಕು ಬೀಜಗಳು ಇರುತ್ತವೆ. ಸಾಮಾನ್ಯವಾಗಿ ಪ್ರತಿ ಹಳ್ಳಿಯಲ್ಲಿಯೂ ಈ ಗಿಡವನ್ನು ಕಾಣಬಹುದಾಗಿದೆ.
ಇದರ ಎಲೆಗಳು ಸಿಂಹದ ಹಸ್ತದಂತಿರುತ್ತವೆ. ಆದುದರಿಂದ ಈ ಮೂಲಿಕೆಗೆ ಸಿಂಹಪರ್ಣಿ ಎಂದು ಸಂಸ್ಕ್ರತ ಗ್ರಂಥದಲ್ಲಿ ತಿಳಿಸುತ್ತವೆ. ಇದರಲ್ಲಿ ವ್ಯಾಸಿಸೈನ್ಎನ್ನುವ ಕಟು ಕಹಿ ಕ್ಷಾರವಿರುತ್ತದೆ. ಇದು ಉಸಿರಾಟದ ಶ್ವಾನನಾಳಗಳ ವ್ಯಾಧಿಯನ್ನು ಗುಣಪಡಿಸುವುದರಲ್ಲಿ ಗಮನಾರ್ಹ ಪಾತ್ರವನ್ನು ವಹಿಸುತ್ತದೆ. ವಸಾಕ ಅನ್ನುವುದು ಮತ್ತೊಂದು ಹೆಸರು. ಜೇನು ಹುಳಗಳು ಅತಿಯಾಗಿ ಬಯಸುವ ಮಕರಂದ ಭರಿತ ಪುಷ್ಪ ಬಿಡುವ ಗಿಡ.


ಸದಾ ಹಸಿರು ಭರಿತ ಗಿಡವಿದು.
ಕವಲುಗಳಿಂದ ತುಂಬಿರುತ್ತದೆ. ಸದಾ ಹಸುರಾಗಿರುವ ದಟ್ಟವಾದ ಪೊದೆಯಂತಿರುವ ಸಸ್ಯರಾಶಿ. ಗಿಡದ ಎಲೆಗಳು ಅಗಲವಾಗಿದ್ದು ತುದಿಯಲ್ಲಿ ಚೂಪಾಗಿರುವುದು ಇದರ ವಿಶೇಷ. ಎರಡು ದಳಗಳ ಬಿಳಿಹೂಗಳು ಒತ್ತೊತ್ತಾಗಿ ಕವಲುಗಳ ತುದಿಯಲ್ಲಿ ಕಾಣಿಸುತ್ತವೆ. ನಮ್ಮದೇಶದ ಉಷ್ಣವಲಯ ಹಾಗೂ ಸಮಶೀತೋಷ್ಣವಲಯದಲ್ಲಿ ವರ್ಶವಿಡೀ ಸ್ವಾಭಾವಿಕವಾಗಿ ಬೆಳೆಯುತ್ತವೆ. ಪೊದೆಯಂತೆ ದಟ್ಟವಾಗಿ ಬೆಳೆಯುವ ಗುಣವುಳ್ಳ ಈ ಸಸ್ಯವನ್ನು ಹೊಲದ ಬೇಲಿಯಲ್ಲೂ, ಮನೆಯ ಕಾಂಪೌಂಡ್ ಬಳಿಯಲ್ಲೂ ಬೆಳೆಸಬಹುದಾದ ಸಸ್ಯ. ಸಾಮಾನ್ಯವಾಗಿ ೨ ಮೀ ಎತ್ತರ. ಒಂಟಿ ಸಸ್ಯವಾಗಿ ಬೆಳಸಿದರೆ, ೧.೫ ಚ.ಮೀ ಸ್ಥಳಾವಕಾಶ ಇರಬೇಕು. ಕುಂಡದಲ್ಲಿ ಬೆಳೆಸುವಹಾಗಿದ್ದರೆ, ೨೫-೩೦ ಸೆಂ. ಮೀ.ಸುತ್ತಳತೆಯ ವಾಗಿದ್ದರೆ ಉತ್ತಮ. ಎಲ್ಲಾ ಸಸ್ಯಗಳು ಬಯಸುವ ಸೂರ್ಯಬೆಳಕು ಇದಕ್ಕೂ ಅಗತ್ಯ. ಆದರೂ ನೆರಳಿನಲ್ಲೂ ಬೆಳೆಸಲು ಅಡ್ಡಿಯಿಲ್ಲ. ಮನೆಯ 'ವರಾಂಡ'ದಲ್ಲಿ ಅಥಾ ದೊಡ್ಡ ಮರಗಳ ನೆರಳಿನಲ್ಲೂ ಬೆಳೆಸಬಹುದು.

 ವಾರಕ್ಕೆ ಎರಡು ಬಾರಿ ನೀರು
ಈ ಸಸ್ಯಕ್ಕೆ ಸಹಜವಾದ ಗಡಸು  ಗುಣವಿದೆ. ಆಗಾಗ್ಯೆ ನೀರು ಚುಮುಕಿಸಿದರೆ ಸಾಕು. ಒಂದುವೇಳೆ ಕುಂಡದಲ್ಲಿ ಬೆಳೆಸಿದರೆ, ವಾರಕ್ಕೆರಡು ಬಾರಿಯಾದರೂ ನೀರು ಉಣಿಸುವುದು ಒಳ್ಳೆಯದು. ಸಸ್ಯವನ್ನು ಸೊಂಪಾಗಿ ಬೆಳೆಸಲು ಮತ್ತು ಅದರ ಆಕಾರವನ್ನು ನಿಯಂತ್ರಿಸಲು ಕೊಂಬೆಗಳನ್ನು ಆಗಾಗ ಕಡಿಯುವುದು ಒಳ್ಳೆಯದು. ಬಲಿತ ಎಲೆಗಳನ್ನು ನಮಗೆ ಬೇಕಾದಾಗ ಕಿತ್ತು ಬಳಸಬಹುದು. ಸರಿಯಾಗಿ ಪೋಷಿಸಿದರೆ ಗಿಡ ಹೆಚ್ಚು ಕಾಲ ಎಲೆಗಳನ್ನು ಬಿಡುತ್ತಾ ಹೋಗುತ್ತದೆ. ಸೋಗೆ ಗಿಡದ ಎಲೆಗಳನ್ನು ಅಗತ್ಯವಿದ್ದಾಗ ಕಿತ್ತುನೆರಳಿನಲ್ಲಿ ಚೆನ್ನಾಗಿ ಒಣಗಿಸಿ ಪುಡಿಮಾಡಿ ಡಬ್ಬಿಗಳಲ್ಲಿ ತುಂಬಿಟ್ಟುಕೊಳ್ಳಬಹುದು.

ಸಸ್ಯಾಭಿವೃದ್ಧಿ ಹೇಗೆ ?
 ಇದನ್ನು ಬೆಳೆಯುವುದು ತೀರಾ ಸುಲಭ.   ಇದರ ಬಲಿತ ಎರಡು ಗಿಣ್ಣುಗಳಿರುವ ತುಂಡನ್ನು ತೆಗೆದುಕೊಳ್ಳಿ. ಅದನ್ನು ನಿಮಗೆ ಅನಿಸಿದ ಕಡೆ ನೆಡಿ.  ನೀರು- ಗೊಬ್ಬರ ಕೊಟ್ಟರೆ ಕೆಲವೇ ದಿನಗಳಲ್ಲಿ ನೀವೇ ಆಶ್ಚರ್ಯ ಪಡುವ ರೀತಿ ಬೆಳೆಯುತ್ತದೆ. ಪ್ರತಿ ಗಿಣ್ಣಿನಲ್ಲಿಯೂ ಚೆನ್ನಾಗಿ ಬೇರು ಬರುತ್ತದೆ. ಕೇರಳ, ಕೊಡಗು, ದಕ್ಷಿಣ ಮತ್ತು ಉತ್ತರ ಕನ್ನಡದಲ್ಲಿ ಕಾಣ ಬರುತ್ತದೆ. ಕೆಲ ಆಸಕ್ತರು ಬೇರೆಡೆಯಿಂದ  ತಂದು ಬೆಳೆಸಿ, ಬಳಸುತ್ತಿದ್ದಾರೆ. ನಿಮಗೇನಾದರೂ ಇದನ್ನು ಬೆಳೆಯುವ ಆಸಕ್ತಿ ಇದ್ದರೆ, ಹತ್ತಾರು ತುಂಡುಗಳಿದ್ದರೆ ಸಾಕು. ನಿಮ್ಮ ಆಸಕ್ತಿಗೆ ತಕ್ಕಂತೆ ಬೆಳೆಸಬಹುದಾಗಿದೆ. ಸಸ್ಯಕ್ಷೇತ್ರದಲ್ಲೂ ಬೆಳೆದು ನೆಡಬಹುದು. ಧಾರಾಳವಾಗಿ ಸೊಪ್ಪು ದೊರೆಯುವುದರಿಂದ ಪ್ರಗತಿ ಪರ ಕೃಷಿಕರು ಇದನ್ನು ಗೊಬ್ಬರ ಬಳಕೆಗೆ ಬಳಸುವರು.


ಕೃಷಿಯಲ್ಲಿ ಬಳಕೆ ಹೇಗೆ ?
 ಇದು ಎಲ್ಲಾ ವಾತವರಣಕ್ಕೆ ಹೊಂದಿಕೊಂಡು ಸೊಂಪಾಗಿ ಬೆಳೆಯುತ್ತದೆ. ಈ ಗುಣದಿಂದಾಗಿಯೇ ಇದನ್ನು ಜೀವಂತ ಬೇಲಿ ನಿರ್ಮಾಣಕ್ಕೆ ಹಲವಾರು ಕಡೆ ಬಳಸಲಾಗುತ್ತದೆ. ಇದರ ವಿಶೇಷ ಗುಣವೆಂದರೆ, ಇವುಳನ್ನು ಆಡು , ಕುರಿ ಸೇರಿದಂತೆ ಯಾವುದೇ ರಾಸುಗಳು ತಿನ್ನುವುದಿಲ್ಲ. ಕಾಡು ಪ್ರಾಣಿಗಳು ಸಹಾ ಇದನ್ನು ತಿನ್ನುವುದಿಲ್ಲ. ಧಾರಾಳವಾಗಿ ದೊರಕುವ ಸೊಪ್ಪನ್ನು ಕೃಷಿ ಉದ್ಧೇಶಗಳಿಗಾಗಿ ಭಾರತದ ಬಹುತೇಕ ಕಡೆ ಬಳಸಲಾಗುತ್ತದೆ. ಇದು ಕೃಷಿಗೆ ಧಾರಾಳವಾಗಿ ಸಾರಜನಕವನ್ನು ನೀಡುತ್ತದೆ. ಮಳೆಗಾಲದಲ್ಲಿ ಚೆನ್ನಾಗಿ ಚಿಗುರುವುದರಿಂದ ಪ್ರತಿ 15- 20 ದಿನಗಳಿಗೊಮ್ಮೆ ಕತ್ತರಿಸಿ, ಸಾವಯವ ಗೊಬ್ಬರಕ್ಕೆ ಬಳಸಬಹುದು.  ಧಾರಾಳವಾಗಿ ನೀರಿನ ಲಭ್ಯತೆ ಇದ್ದಲ್ಲಿ ಇದರಿಂದ ವರ್ಷದ ಎಲ್ಲಾ ತಿಂಗಳಲ್ಲಿ ಧಾರಾಳವಾಗಿ ಸೊಪ್ಪನ್ನು ಪಡೆಯಬಹುದು. ವ್ಯವಸಾಯಕ್ಕೆ ಯೋಗ್ಯವಲ್ಲದ ಕಲ್ಲು ಬಂಡೆಗಳಿರುವ ಪ್ರದೇಶ, ಬೇಲಿ, ಮುಂತಾದಡೆ ಬೆಳೆಸಿ ಬಳಸಬಹುದು.
ಇದು ಬಹುತೇಕ ಹಸಿರೆಲೆಗಳಂತೆ ಸಗಣಿ, ಗಂಜಲದೊಡನೆ ಬೆರೆತು  ಬೇಗನೆ ಕೊಳೆಯುತ್ತದೆ. ಪದರ ಪದರವಾಗಿ ಇದನ್ನು ಮತ್ತು ಸಗಣಿ, ಗಂಜಲ, ಮಣ್ಣು, ಇತರ ಕಸ ಕಡ್ಡಿಗಳೊಡನೆ ಸೇರಿಸಿ ಕೊಳೆತ ನಂತರ ಎಲ್ಲಾ ಬೆಳೆಗಳಿಗೂ ಬಳಸಬಹುದು. ಇದರ ಧಾರಾಳ ಬಳಕೆಯಿಂದ ಕೃಷಿಗೆ ಯೂರಿಯಾ ಗೊಬ್ಬರ ಬಳಕೆಯನ್ನು ಹಂತ- ಹಂತವಾಗಿ ಕಡಿಮೆ ಮಾಡಿ ನಿಲ್ಲಿಸಬಹುದು.  ಹಸಿ ಸೊಪ್ಪನ್ನು ಬೇಸಾಯ ಮಾಡುವ ಭೂಮಿಗೆ ನೇರವಾಗಿ ಹಾಕಿ ಉಳುಮೆ ಮಾಡಿಯೂ ಕೊಳೆಸಬಹುದಾಗಿದೆ. ಬಾಂಗ್ಲಾ ದೇಶದಲ್ಲಿ ಇದನ್ನು ಔಷಧೀಯ ಮತ್ತು ಕೃಷಿ ಉದ್ಧೇಶಗಳಿಗಾಗಿ ಬಳಸಲಾಗುತ್ತದೆ.
ಕಾಯಿಲೆಗಳಿಗೆ ರಾಮಬಾಣ
ಉಷ್ಣಗುಣವನ್ನು ಹೊಂದಿದ ಈ ಸಸ್ಯ, ನೆಗಡಿ,ಕೆಮ್ಮು ಮುಂತಾದ ಸಾಮಾನ್ಯ ಕಾಯಿಲೆಗಳಿಗೆ ರಾಮಬಾಣದಂತಿದೆ. ಆಡುಸೋಗೆ ಸೊಪ್ಪನ್ನು ಉಪಯೋಗಿಸಿ ಕಷಾಯವನ್ನು ಮಾಡುತ್ತಾರೆ. ಸ್ವಲ್ಪ ಕಹಿಯಾಗಿರುವ ಸೊಪ್ಪಿನ ರಸ  ಔಷಧೀಯ ಖಜಾನೆಯನ್ನೇ ಹೊಂದಿದೆ.
'ಸೋಗೆ ಗಿಡ'ದ ಎಲೆಗಳಲ್ಲದೆ, ತೊಗಟೆ, ಬೇರು, ಹೂವುಗಳೆಲ್ಲವೂ ಉಪಯೋಗಕ್ಕೆ ಬರುವುದರಿಂದ ಪುಡಿ ತಯಾರಿಸಿ ಶೇಖರಿಸಿಡಬಹುದು. ಎಲೆ ಪುಡಿಯ ಕಷಾಯ ಗಾಯವನ್ನು ಗುಣಪಡಿಸುತ್ತದೆ. ಅಸ್ತಮಾ, ನೆಗಡಿ, ಕೆಮ್ಮು, ಮುಂತಾದ ರೋಗಗಳಿಗೆ ದಿವ್ಯೌಷಧಿಯೆಂದು ನಂಬುತ್ತಾರೆ. ಹೆಚ್ಚಾಗಿ ದಮ್ಮು ಕೆಮ್ಮು ಇದ್ದಾಗ, ಎಲೆಗಳನ್ನು ಬಾಡಿಸಿ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ಕುಡಿದರೆ ಬೇಗನೆ ವಾಸಿಯಾಗುತ್ತದೆಯೆಂದು ಆಯುರ್ವೇದ ವೈದ್ಯರು ಹೇಳುತ್ತಾರೆ. ಇದು ಭೇದಿಗೆ ಅತ್ಯುತ್ತಮ ಮದ್ದು ಸಹಿತ. ಮನೆಯಲ್ಲಿ ಬೇರೆಗಿಡಗಳ ಜೊತೆಗೆ ಈ ಗಿಡವನ್ನೂ ನೆಡುವುದು ಒಳ್ಳೆಯದು. ಈ ವನಸ್ಪತಿಯನ್ನು 'ಆಡುಮುಟ್ಟದ ಸೊಪ್ಪು' ಎಂದು ಕರೆಯುತ್ತಾರೆ.





ಬೇರು, ತೊಗಟೆ ಮತ್ತು ಎಲೆಗಳು ಕೆಮ್ಮು, ಆಸ್ತಮಾಗಳ ನಿವಾರಣೆಗೆ ಉಪಯುಕ್ತವಾಗಿವೆ. ಉಸಿರಾಟವನ್ನು ಸುಗಮಗೊಳಿಸುತ್ತದೆ. ಇದು ರಕ್ತಸ್ರಾವ  ನಿಯಂತ್ರಕವಾಗಿ ಕೂಡಾ ಬಳಸಲಾಗುತ್ತದೆ. ಮೂತ್ರವರ್ಧಕ , ಮತ್ತು ನಂಜುನಾಶಕ ಗುಣಗಳನ್ನು ಹೊಂದಿದೆ. ಮಲೇರಿಯಾ ಜ್ವರ ಮತ್ತು ಡಿಪ್ತಿರಿಯಾದ ಚಿಕಿತ್ಸೆಯಲ್ಲಿ ಪುಡಿಮಾಡಿದ ಮೂಲವನ್ನು ಬಳಸಲಾಗುತ್ತದೆ. ಗೊನೊರಿಯಾ ಮತ್ತು ಸಂಧಿವಾತದಲ್ಲಿ ಉಪಯುಕ್ತ.  ಅಸ್ತಮ ರೋಗಿಗಳು ಒಣಗಿದ ಎಲೆಗಳನ್ನು ಸಿಗರೇಟ್ ಗಳಾಗಿ ತಯಾರಿಸಿ ಬಳಸುವರು.  ಭೇದಿ ನಿವಾರಕವಾಗಿ ಬಳಸಲಾಗುತ್ತದೆಎಲ್ಲಾ ಶೀತ ಸಂಬಂಧಿತ ರೋಗಗಳಿಗೆ ಪರಿಣಾಮಕಾರಿಯಾಗಿದೆ.  ಇದು ಅಜೀರ್ಣ, ಚರ್ಮದ ಕಾಯಿಲೆಗಳು ಔಷಧವಾಗಿಯೂ ಬಳಸಲಾಗುತ್ತದೆ. .( ಆದರೆ, ನೀವು ತಜ್ಞರ ಸಲಹೆ ಇಲ್ಲದೆ, ಇದರ ಔಷಧಿಯನ್ನು  ಬಳಸಲೇ ಬೇಡಿ. )
               ಇದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಅನಧಿಕೃತ ಪ್ರಾಂತೀಯ ಹೂವಾಗಿದೆ.







No comments:

Post a Comment

ಹನಿ ನೀರೂ ಬಂಗಾರ...! Drop of water is Gold .......!

ಹನಿ ನೀರೂ ಬಂಗಾರ...! Pl watch my  these blogs.  Kodagu Darshini : http://koodanda.blogspot.com/ Kodagu Darshini (Kodagina Antaranga):...