Friday 23 March 2018

Natural Tooth Powder 'ಉಮ್ಮಿ ಕರಿ'

ಸ್ವದೇಶಿ ಹಲ್ಲು ಪುಡಿ-'ಉಮ್ಮಿ ಕರಿ'




ಸಚಿತ್ರ  ಬರಹ: ಕೂಡಂಡ ರವಿ






ಗರಗರನೇ ಕಾಲಚಕ್ರ ಉರುಳಿದಂತೆ, ನಾವೂ ಅರಿತೋ ಅರಿಯದೆಯೋ ಅದರೊಡನೆ ಸಾಗುತ್ತಿರುತ್ತೇವೆ. ಅಧುನಿಕತೆ ಎಂಬ ಹೆಸರಿನಲ್ಲಿ ನಾವು ನಮ್ಮ ಪೂರ್ವಜರು ಬಳಸಿದ ಬಳಸುತ್ತಿದ್ದಂತಹ ಹತ್ತಾರು ನೂರಾರು ಪ್ರಯೋಜನಕಾರಿ ಮಾನವನಿಗೆ ಹಿತಕಾರಿಯಾಗಿದ್ದಂತಹ ವಸ್ತು- ವಗೈರೆಗಳನ್ನು ದೂರ ಮಾಡುತ್ತಾ ಬಂದಿದ್ದೆವು. 



ಇದರಲ್ಲಿ ಬಹುರಾಷ್ಟೀಯ ಕಂಪೆನಿಗಳ ಪಾಲು ಹೆಚ್ಚಿನದ್ದಾಗಿತ್ತು. ಉದಾಹರಣೆಗಾಗಿ ನಮ್ಮ ಪೂರ್ವಜರು, ಹಿರಿಯರು ಹಲ್ಲುಗಳನ್ನು ಶುಭ್ರವಾಗಿಡಲು ಬಳಸುತ್ತಿದ್ದ ಇಟ್ಟಿಗೆ ಪುಡಿ, ಇದ್ದಿಲು, ಮಾವಿನ ಸೊಪ್ಪು, ಬೇವಿನ ಸೊಪ್ಪು ಮತ್ತಿತರ ವಸ್ತುಗಳನ್ನು ವಿದೇಶಿಗರು -ಅದೆಲ್ಲಾಹೊಲಸು-ಗಲೀಜು ಎಂದರು. ನಮ್ಮ ಜನತೆ ನಂಬಿದರು. ಇದನ್ನೇ ಬಂಡವಾಳವನ್ನಾಗಿಸಿದ ಬಹುರಾಷ್ಟೀಯ ಕಂಪೆನಿಗಳು ನಮ್ಮ ದೇಶವನ್ನೇ ಬೃಹತ್ ಮಾರುಕಟ್ಟೆಯನ್ನಾಗಿಸಿಕೊಂಡು ಅವರು ಬೆಳೆದರು. ನಮ್ಮ ದೇಶದ ಜನತೆಯನ್ನು ಶೋಷಿಸಿದರು. ಆದರೆ, ಕ್ರಮೇಣ ನಮ್ಮ ಪೂರ್ವಜರು ಬಳಸುತ್ತಿದ್ದ ವಸ್ತುಗಳ ಮಹತ್ವ, ನಮ್ಮ ಜೀವನದಲ್ಲಿ ಅವುಗಳ ಪ್ರಾಮುಖ್ಯತೆ ಇಂದಿನ ಜನಾಂಗದ ಅರಿವಿಗೆ ಬರಲಾರಂಭವಾಗಿದೆ. ಈ ನಿಟ್ಟಿನಲ್ಲಿ ದೇಶದ ಸಣ್ಣಪುಟ್ಟ ಪಟ್ಟಣಗಳಿಗೂ ಸಹಾ ಪತಂಜಲಿ ಉತ್ಪನ್ನಗಳು ದಾಂಗುಡಿ ಇಡುತ್ತಿವೆ. ಬಹುತೇಕ ಜನತೆಯಲ್ಲಿ ತಡವಾಗಿಯಾದರೂ ಸ್ವದೇಶಾಭಿಮಾನ ಬೆಳೆಯಲಾರಂಭವಾಗಿವೆ.
ಇದೇ ರೀತಿಯಲ್ಲಿ ಜನತೆಯ ಮನೋಭಾವ ಬದಲಾಗಲಾರಂಭವಾಗಿವೆ. ನಾವು ನಮ್ಮದೇ ಆದ ಪುರಾತನ ಕಾಲದಲ್ಲಿ ಬಳಕೆಯಲ್ಲಿದ್ದ ವಸ್ತುಗಳನ್ನು ಆರೋಗ್ಯವಂತ ಸಮಾಜಕ್ಕಾಗಿ ಬಳಸಬೇಕು ಎಂಬ ಕಾಳಜಿ ಹೆಚ್ಚಾಗುತ್ತಿದೆ.
ಅದಕ್ಕೊಂದು ತಾಜಾ ಉದಾಹರಣೆ ಇಲ್ಲಿದೆ.


ಮಾರುಕಟ್ಟೆಗೆ ಬಂತು ಇದ್ದಿಲು...!
'ದೇವರ ನಾಡು' ಎಂದು ತಮ್ಮ ರಾಜ್ಯವನ್ನು ಕರೆದುಕೊಳ್ಳುತ್ತಿರುವ ಕೇರಳಿಗರು ದೇವರೇ ಮೂಗಿನ ಮೇಲೆ ಬೆರಳಿಡುವ  ಈ ಸಾಹಸಕ್ಕೆ ಕೈ ಹಾಕಿದ್ದಾರೆ ! ಸುಮಾರು ಒಂದುವರ್ಷದ ಹಿಂದೆ ಈ ಕಾರ್ಯ ಆರಂಭವಾಗಿದೆ. ವಿದೇಶಿ ಟೂತ್ಪೇಸ್ಟ್ ಕಂಪೆನಿಗಳಿಗೆ ಸೆಡ್ಡು ಹೊಡೆದು, ಸ್ವದೇಶಿಯ ಅಭಿಮಾನ ಹುಟ್ಟಿಸುವಲ್ಲಿ ಕೆಲವು ಕ್ರಿಯಾಶೀಲ ಯುವಕರು ತಮ್ಮನ್ನು  ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ಪುರಾತನ ಕಾಲದಲ್ಲಿ ಬಳಕೆಯಲ್ಲಿದ್ದ ಭತ್ತದ ಹೊಟ್ಟಿನ ಇದ್ದಿಲಿನ ಪುಡಿಗೆ  ಮರು ಕಾಯಕಲ್ಪ ನೀಡಿ, ತಮ್ಮ ಉದರಪೋಷಣೆಯನ್ನು ಮಾಡಲು ಆರಂಭಿಸಿದ್ದಾರೆ ! ಅದರಂತೆ ಅವರು ಅಪ್ಪಟ ಸ್ವದೇಶಿಯ ಹಲ್ಲು ಬೆಳಗುವ ಪುಡಿಯನ್ನು ಮಾರುಕಟ್ಟೆಗೆ ಬಿಟ್ಟಿದ್ದಾರೆ. 30 ಗ್ರಾಂ ಭತ್ತದ ಹೊಟ್ಟಿನ ಇದ್ದಿಲು(ಉಮ್ಮಿಕರಿ)ಗೆ ಕೇವಲ 5ರೂಪಾಯಿ ಬೆಲೆ ಇದೆ. ಸ್ಥಳೀಕ ಹಿರಿಯರು ತಮಗೆ ಪುರಾತನ ಕಾಲದ ಹಲ್ಲುಪುಡಿ ಮತ್ತೆ ದೊರೆತ ಸಂತೋಷದಲ್ಲಿ ಅದನ್ನು ಬಳಸುತ್ತಿದ್ದಾರೆ. ಕಿರಿಯರೂ ಅವರನ್ನು ಅನುಸರಿಸುತ್ತಿದ್ದಾರೆ. ಈ ರೀತಿಯ ವಿನೂತನ ಪ್ರಯತ್ನಗಳು ನಮ್ಮಲ್ಲೂ ಆರಂಭವಾದರೆ ನಿರುದ್ಯೋಗ ಸಮಸ್ಯೆಯೂ ನಿವಾರಣೆಯಾದೀತು. ನಮ್ಮ ಹಲ್ಲು-ವಸಡುಗಳು ಸುದೀರ್ಘ ಕಾಲ ಆರೋಗ್ಯವಾಗಿರಬಲ್ಲವು.  
ಇನ್ನೇಕೆ ತಡ. ಉದ್ಯೋಗವಿಲ್ಲ ಎಂದು ಕೊರಗುವವರು ಈ ನಿಟ್ಟಿನಲ್ಲಿ ಪ್ರಯತ್ನ ಪಡಬಹುದು.ಶುಭ್ಯಸಂ ಶೀಘ್ರಂ !

No comments:

Post a Comment

ಹನಿ ನೀರೂ ಬಂಗಾರ...! Drop of water is Gold .......!

ಹನಿ ನೀರೂ ಬಂಗಾರ...! Pl watch my  these blogs.  Kodagu Darshini : http://koodanda.blogspot.com/ Kodagu Darshini (Kodagina Antaranga):...