Wednesday, 28 March 2018

ಕರಿ ಭತ್ತ -‘ಬಂಗಾರ’ದ ಬೆಲೆ ! - Golden vallue for Black Paddy !



ಕರಿ ಭತ್ತಕ್ಕೆ ‘ಬಂಗಾರ’ದ ಬೆಲೆ !  

  ಬರಹ : ಕೂಡಂಡ ರವಿ. 


 ಆರೋಗ್ಯ ಪೂರ್ಣ ಅಕ್ಕಿಯತ್ತ ಜನತೆಯ ಗಮನ ಹೊರಳುತ್ತಿದೆ. ಹಿಂದೆಲ್ಲಾ ಬೆಳ್ಳನೆಯ ಅಕ್ಕಿ,  ಕುಸಲಕ್ಕಿ , ಸಣ್ಣಕ್ಕಿ, ಸೋನಾ ಮಸ್ಸೂರಿ, ಬಿಟಿ ಅಕ್ಕಿ, ಸ್ಥಳೀಯವಾಗಿ ದೊರೆಯುತ್ತಿರುವ ವೈವಿಧ್ಯಮಯ ಅಕ್ಕಿಯನ್ನು ಸಿರಿವಂತರು ದೂರ ಮಾಡುತ್ತಿದ್ದಾರೆ. ಧನಿಕರಲ್ಲಿ ಬಹುತೇಕ ಮಂದಿಗೆ ಆರೋಗ್ಯವೇ ಚಿಂತೆಗೀಡು ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಬಹುತೇಕರ ದೃಷ್ಟಿ ಆಹಾರದಿಂದ ಆರೋಗ್ಯವನ್ನು ವೃದ್ಧಿಸಿಕೊಳ್ಳುವುದು ಹೇಗೆ ಎಂಬ ಕಡೆಗೆ ನೆಟ್ಟಿದೆ.


 ಕಿಲೋಗ್ರಾಂಗೆ 250 ರೂಪಾಯಿ ! 
 ಇದೀಗ ಕಪ್ಪು ಬಣ್ಣದ ಅಕ್ಕಿಗೂ ಬಂಗಾರದ ಬೆಲೆ ಬಂದಿದೆ. ವೈಶಿಷ್ಟ್ಯಪೂರ್ಣ ಕಪ್ಪು ಅಕ್ಕಿ ಪ್ರತಿ ಕಿಲೋ ಗ್ರಾಂಗೆ 250ಕ್ಕೂ ಅಧಿಕ ! ಅತಿಶಯೋಕ್ತಿಯೇನಲ್ಲ. ಕಪ್ಪಾಗಿ ಕಾಣುವ ಅಕ್ಕಿಗೂ ಆರೋಗ್ಯವರ್ಧನೆಗೆ ಸಹಕಾರಿ ಎಂಬ ಮನೋಭಾವ ನಿಧಾನವಾಗಿ ಹಲವೆಡೆ ನಿಧಾನವಾಗಿ ವ್ಯಾಪಿಸುತ್ತಿದೆ. ಹಲವರು ವಿವಿಧ ತಳಿಯ ಕಪ್ಪು ಭತ್ತವನ್ನು ಬೆಳೆದು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಆದರೆ, ಬರ್ಮಾ ಕಪ್ಪು ಭತ್ತಕ್ಕೆ ರಾಜ್ಯದಲ್ಲಿ ಅಷ್ಟೇನೂ ಪ್ರಚಾರ ಸಿಕ್ಕಿಲ್ಲ. ತುಂಗಭದ್ರಾ ನದಿಯ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಹಿಂದೆ ವ್ಯಾಪಕವಾಗಿ ಸೋನಾ ಮಸ್ಸೂರಿ ಭತ್ತವನ್ನು ಬೆಳೆಯಲಾಗುತ್ತಿತ್ತು. ಕೆಲ ರೈತರು ವಿವಿಧ ಕಾರಣಗಳಿಂದಾಗಿ ಪರ್ಯಾಯ ಬೆಳೆಗಳತ್ತ ವಾಲುತ್ತಿದ್ದಾರೆ. ಇಂತಹ ಪ್ರಯೋಗ ಮಾಡಿ ಯಶಸ್ವಿಯಾದ ರೈತರೋರ್ವರು ಬರ್ಮಾದ ಕಪ್ಪು ಭತ್ತವನ್ನು ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ.


ಕ್ವಿಂಟಾಲ್‍ಗೆ 10ಸಾವಿರ ರೂಪಾಯಿ

 ವಾಡಿಕೆಯಾಗಿ ಕರಾವಳಿ ಭಾಗಗಳಲ್ಲಿ ಬರ್ಮಾ ಕಪ್ಪು ಭತ್ತವನ್ನು ಬೆಳೆಯಲಾಗುತ್ತದೆ. ಆದರೆ, ಇದೀಗ ಶ್ರಮಜೀವಿಯಾದ ಸಿದ್ರಾಮಗೌಡ ಅವರ ಛಲದ ಫಲವಾಗಿ ಅದನ್ನು ಉತ್ತರ ಕರ್ನಾಟಕದಲ್ಲೂ ನೋಡುವಂತಾಗಿದೆ. 2016ರಲ್ಲಿ ಬೆಂಗಳೂರಿನಲ್ಲಿ ಆಯೋಜನೆಗೊಂಡಿದ್ದ ಕೃಷಿ ಮೇಳದಲ್ಲಿ ಗೌಡರ ಗಮನವನ್ನು ಭತ್ತ ಸೆಳೆದಿತ್ತು. ಈ ಭತ್ತವನ್ನು ಹೆಸರಾಂತ ಕಂಪೆನಿಗಳು ಪ್ರತಿ ಕ್ವಿಂಟಾಲ್‍ಗೆ 10ಸಾವಿರ ರೂಪಾಯಿಗೆ ಖರೀದಿ ಮಾಡುತ್ತಿವೆ. ಆದರೆ, ಉತ್ತಮ ಗುಣಮಟ್ಟದ ಈ ಭತ್ತ ಬೆಳೆಯಲು ರಾಸಾಯನಿಕ ಗೊಬ್ಬರದ ಬದಲು ಸಾವಯವ ಗೊಬ್ಬರಗಳನ್ನು ಬಳಸಬೇಕಾಗುತ್ತದೆ. ಅದರಂತೆ , ಗೌಡ್ರರೂ ಕೂಡಾ ಎರೆಗೊಬ್ಬರ, ಪಂಚಗವ್ಯ, ಬೇವಿನ ಕಷಾಯ, ಬೇವಿನ ಬೀಜದ ಪುಡಿಗಳನ್ನು ಬಳಸಿ ಅದರಲ್ಲಿ ಯಶಸ್ಸು ಗಳಿಸಿದ್ದಾರೆ
.




ಕ್ಯಾನ್ಸರ್ ನಿವಾರಕ ಅಕ್ಕಿ:

 ಬರ್ಮಾ ಬ್ಲಾಕ್ ಅಕ್ಕಿಯು ಕ್ಯಾನ್ಸರ್ ನಿವಾರಕ, ತೂಕ ಇಳಿಕೆಗೆ ನೆರವು ನೀಡಬಲ್ಲದು. ರಕ್ತದೊತ್ತಡ, ಸಕ್ಕರೆ ಕಾಯಿಲೆ ನಿಯಂತ್ರಣ ಮಾಡುವ ಅಪೂರ್ವ ಶಕ್ತಿಯನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ವಿಟಮಿನ್ “ಬಿ” ಮತ್ತು ಧಾರಾಳ ನಾರಿನಂಶವನ್ನು ಕೂಡಾ ಇದು ಹೊಂದಿದೆ. ಇದರಲ್ಲಿ ಸುಮಾರು 35ಕ್ಕೂ ಅಧಿಕ ತಳಿಗಳಿವೆ. ಸುವಾಸನಾ ಭರಿತ ಅಕ್ಕಿಯನ್ನು ಫಲಾವ್ ಮಾಡಲು ಬಳಸಲಾಗುವುದು.  ಚಿಲ್ಲರೆ ಮಾರುಕಟ್ಟೆಯಲ್ಲಿ ಈ ಅಕ್ಕಿಯ ಬೆಲೆ 300 ರೂಪಾಯಿಗೂ ಅಧಿಕವಿದೆ. ಈ ಗುಣಗಳೇ ಈ ಅಕ್ಕಿ ದುಬಾರಿಯಾಗಲು ಪ್ರಮುಖ ಕಾರಣ.  ಆನ್‍ಲೈನ್‍ನಲ್ಲಿಯೂ ಈ ಅಕ್ಕಿಯು ಭಾರೀ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ಬೆಲೆ ಸುಮಾರು ಅರ್ಧ ಕಿಲೋ ಗ್ರಾಂಗೆ 195ರೂಪಾಯಿಗೂ ಹೆಚ್ಚು.



 ಈ ಭತ್ತದ ತಳಿಯನ್ನು ನಮ್ಮ ಜಿಲ್ಲೆಯಲ್ಲಿಯೂ ಯಶಸ್ವಿಯಾಗಿ ಬೆಳೆಸಬಹುದೇ ಎಂಬ ಬಗ್ಗೆ ಆಸಕ್ತ ರೈತಾಪಿ ವರ್ಗದವರು ಪ್ರಯೋಗಶೀಲರಾಗಬೇಕಿದೆ.  ಅದು ಯಶಸ್ವಿಯಾದಲ್ಲಿ ರೈತಾಪಿ ವರ್ಗದವರು ಆರ್ಥಿಕವಾಗಿ ‘ಸಬಲ’ರಾದಂತೆ ಸರಿ. ಹಾಗಾದರೂ, ಪಾಳು ಬಿಟ್ಟ ಗದ್ದೆಗಳಲ್ಲಿ ಮತ್ತೆ ಭತ್ತ ತೆನೆ ಕಾಣಬಹುದೇನೋ ? ಬೀಜದ ಭತ್ತಕ್ಕಾಗಿ “ಕೃಷಿ ಮೇಳ” ಗಳಲ್ಲಿ ಪ್ರಯತ್ನಿಸಬಹುದು.



                ಭತ್ತದ ಬೀಜಗಳು ಆನ್ ಲೈನ್ ನಲ್ಲಿ ಸಿಗುತ್ತದೆ. ಆದರೆ, ದುಬಾರಿ. 100 ಮತ್ತು ಸಾವಿರ ಬೀಜಗಳ ಪೊಟ್ಟಣಗಳು ಸಿಗುತ್ತದೆ. 

No comments:

Post a Comment

ಹನಿ ನೀರೂ ಬಂಗಾರ...! Drop of water is Gold .......!

ಹನಿ ನೀರೂ ಬಂಗಾರ...! Pl watch my  these blogs.  Kodagu Darshini : http://koodanda.blogspot.com/ Kodagu Darshini (Kodagina Antaranga):...